ಆರು ಹಿತವರು ನಿನಗೆ
ಪುರಂದರ ದಾಸರು
ಆರು ಹಿತವರು ನಿನಗೆ ಮೂರು ಮಂದಿಗಳೊಳಗೆ
ನಾರಿಯೋ, ಧಾರುಣಿಯೋ, ಬಲು ಧನದ ಸಿರಿಯೋ || ಪ ||
ಅನ್ಯರಲಿ ಜನಿಸಿದ ಅಂಗನೆಯ ಕರೆತಂದು
ತನ್ನ ಮನೆಗವಳ ಯಜಮಾನಿಯೆನಿಸಿ
ಭಿನ್ನವಿಲ್ಲದ ಅರ್ಧ ದೇಹವೆನಿಸುವ ಸತಿಯು
ಕಣ್ಣಿನಲಿ ನೋಡಲಮ್ಮಳು ಕಾಲವಶದಿ || ೧ ||
ಮುನ್ನ ಶತಕೋಟಿ ರಾಯರುಗಳಾಳಿದ ನೆಲವ
ತನ್ನದೆಂದೆನುತ ಶಾಸನವ ಬರೆಸಿ
ಬಿನ್ನಣದ ಮನೆಕಟ್ಟಿ ಕೋಟೆಕೊತ್ತಳವಿಕ್ಕೆ
ಚನ್ನಿಗನಸುವಳಯೆ ಹೊರಗೆ ಹಾಕುವರು || ೨ ||
ಉದ್ಯೋಗ ವ್ಯವಹಾರ ನೃಪಸೇವೆ ಕುಶಲಗತಿ
ಕ್ಷುದ್ರತನ ಕಳವು ಪರದ್ರೋಹದಿಂದ
ಬುದ್ಧಿಯಿಂದಲೇ ಗಳಿಸಿ ಸಿಕ್ಕಿದಂತರ್ಥವನು
ಸದ್ಯದಲ್ಲಾರು ಉಂಬುವರು ಹೇಳು ಮನುಜಾ || ೩ ||
ಶೋಕವನು ಗೈಯುವರು ಸತಿಸುತರು ಬಾಂಧವರು
ಜೋಕೆ ತಪ್ಪಿದ ಬಳಿಕ ಅರ್ಥವ್ಯರ್ಥ
ಲೋಕದೊಳು ಗಳಿಸಿರ್ದ ಪುಣ್ಯಪಾಪಗಳೆರಡು
ಸಾಕಾರವಾಗಿ ಸಂಗಡ ಬಾಹೋದಲ್ಲದೆ || ೪ ||
ಅಸ್ಥಿರದ ದೇಹವನು ನೆಚ್ಚಿನಂಬಿರಬೇಡ
ಸ್ವಸ್ಥದಲಿ ನೆನೆಕಂಡ್ಯಾ ಹರಿ ಪಾದವ
ಚಿತ್ತದೊಳು ಶುದ್ದಿಯಿ ವಿಠಲನೇ
ಉತ್ತಮೋತ್ತಮನೆಂದು ಸುಖಿಯಾಗು ಮನುಜ || ೫ ||